ಭಾರತದ ಹಲವು ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ನಿಲ್ದಾಣಗಳನ್ನು ಕಾಣಬಹುದಾಗಿದೆ. ಕೆಲವು ಜನದಟ್ಟಣೆಯ ಸಾಂದ್ರತೆಯಲ್ಲಿ ಪ್ರಮುಖವಾಗಿದ್ದರೆ ಇನ್ನೂ ಹಲವು ಪ್ರಶಾಂತಮಯ ಪರಿಸರದಿಂದ ಹೆಸರುವಾಸಿಯಾಗಿವೆ. == ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ == ಮುಂಬಯಿನಲ್ಲಿರುವ ಈ ವಿಮಾನ ನಿಲ್ದಾಣವು 1,500 ಎಕರೆಯಷ್ಟು ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿದೆ. ಹಲವು ದೇಶಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು ಲಭ್ಯವಿರುವ ಈ ನಿಲ್ದಾಣವು ಮೊದಲಿಗೆ ಸಾಹರ್ ವಿಮಾನ ನಿಲ್ದಾಣ ಎಂಬ ಹೆಸರನ್ನು ಹೊಂದಿತ್ತು. == ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ == ನವದೆಹಲಿಯ ನೈರುತ್ಯ ದಿಕ್ಕಿಗೆ 16 ಕಿ.ಮೀ ದೂರದಲ್ಲಿರುವ ಪಾಲಂ ಎಂಬಲ್ಲಿ ಈ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣವಿದೆ. ಪ್ರಸ್ತುತ, ಭಾರತದ ಅತಿ ಜನದಟ್ಟಣೆಯಿರುವ ಈ ವಿಮಾನ ನಿಲ್ದಾಣಕ್ಕೆ ಭಾರತದ ಮಾಜಿ ಪ್ರಧಾನಿ ಇಂದಿರಾಗಂಧಿ ಅವರ ಹೆಸರನ್ನು ಅವರ ಗೌರವಾರ್ಥವಾಗಿ ಇದಕ್ಕಿಡಲಾಗಿದೆ. 5,220 ಎಕರೆಯಷ್ಟು ವಿಸ್ತೀರ್ಣದಲ್ಲಿ ಈ ನಿಲ್ದಾಣ ಹರಡಿದೆ. == ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ == ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಭಾರತದ ಮಹಾನಗರ ಚೆನ್ನೈನ ಮೀನಂಬಕ್ಕಂ, ಪಲ್ಲವರಂ ಹಾಗು ತಿರುಸುಲಂ ಪ್ರದೇಶಗಳಲ್ಲಿ ವಿಸ್ತಾರವಾಗಿ ಹಬ್ಬಿದೆ. ಪ್ರಯಾಣಿಕರಿಗೆ ಪ್ರವೇಶ ಭಾಗವನ್ನು ತಿರುಸುಲಂ ನಲ್ಲಿ ಕಲ್ಪಿಸಲಾಗಿದೆ.ಇದರ ಅಧಿಕೃತ ಹೆಸರು ಅರೀಂಗರಣ್ಣಾ ಅಥವಾ ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. == ನೇತಾಜಿ ಸುಭಾಸ ಚಂದ್ರ ಬೋಸ್ ನಿಲ್ದಾಣ, ಕೊಲ್ಕತ್ತಾ == ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕಾತ್ತಾದಲ್ಲಿದೆ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಕೊಲ್ಕತ್ತಾ ನಗರ ಕೇಂದ್ರದಿಂದ ಸುಮಾರು 17 ಕಿ.ಮೀ ದೂರದಲ್ಲಿದೆ. 1670 ಎಕರೆಯಷ್ಟು ವಿಸ್ತಾರವಾಗಿರುವ ಈ ನಿಲ್ದಾಣವು ಮೊದಲಿಗೆ ದಮ್ ದಮ್ ವಿಮಾನ ನಿಲ್ದಾಣ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. == ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು == ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಹೊರವಲಯದಲ್ಲಿ ಸುಮಾರು 40 ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದೆ. 5,130 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಈ ವಿಮಾನ ನಿಲ್ದಾಣವು ಬೆಂಗಳೂರು ಮುಖ್ಯ ರೈಲು ನಿಲ್ದಾಣದಿಂದ ಕೇವಲ 30 ಕಿ.ಮೀ ದೂರವಿದೆ. ಈಗ ಇದು ೩ನೇ ಅತಿ ಜನ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ. == ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚ್ಚಿ == ಕೇರಳದ ಕೊಚ್ಚಿ ನಗರದ ನೆಡುಂಬಾಶೇರಿ ಎಂಬಲ್ಲಿ ಈ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣವಿದೆ. ಇದು ಕೊಚ್ಚಿ ನಗರದಿಂದ 30 ಕಿ.ಮೀ ದೂರದಲ್ಲಿದೆ. == ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಳಿಕೋಡ್ == ಹಿಂದೆ ಕ್ಯಾಲಿಕಟ್ ಎಂದು ಕರೆಯಲಾಗುತ್ತಿದ್ದ ಕೇರಳದ ಇಂದಿನ ಕೊಳಿಕೋಡ್ ನಲ್ಲಿ ಈ ನಿಲ್ದಾಣವಿದೆ. ಕರಿಪುರ್ ನಿಲ್ದಾಣ ಎಂತಲೂ ಕರೆಯಲಾಗುವ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರಿಪುರ್ ನಲ್ಲಿ ನೆಲೆಸಿದ್ದು ಕೊಳಿಕೋಡ್ ನಿಂದ 28 ಕಿ.ಮೀ ದೂರವಿದೆ. == ತ್ರಿವೇಂದ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ == ಕೇರಳದ ರಾಜಧಾನಿ ನಗರ ತಿರುವನಂತಪುರಂ ನಗರ ಕೇಂದ್ರದಿಂದ ಕೇವಲ 3.7 ಕಿ.ಮೀ ದೂರದಲ್ಲಿ ಈ ನಿಲ್ದಾಣವಿದೆ. ಭಾರತದ ನಾಲ್ಕು ಮಹಾನಗರಗಳ ನಂತರ ಬೇರೆಡೆ ನಿರ್ಮಿಸಲಾದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ ಈ ವಾಯು ನಿಲ್ದಾಣ. == ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗೋವಾ == ಹೆಚ್ಚು ಜನಪ್ರಿಯವಾಗಿ ದಾಬೋಲಿಮ್ ನಿಲ್ದಾಣವೆಂದು ಕರೆಯಲ್ಪಡುವ ಈ ವಿಮಾನ ನಿಲ್ದಾಣವು ಗೋವಾದ ದಾಬೋಲಿಮ್ ಎಂಬ ಪ್ರದೇಶದಲ್ಲಿ ನೆಲೆಸಿದೆ. ವಾಸ್ಕೊ ಡ ಗಾಮಾದಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಈ ನಿಲ್ದಾಣವು ರಾಜಧಾನಿ ಪಣಜಿಯಿಂದ 30 ಕಿ.ಮೀ ದೂರದಲ್ಲಿದೆ. == ಸರ್ದಾರ್ ವಲ್ಲಭಭಾಯ್ ಪಟೇಲ್ ನಿಲ್ದಾಣ, ಅಹ್ಮದಾಬಾದ್ == ಸರ್ದಾರ್ ವಲ್ಲಭಭಾಯ್ ಪಟೇಲ್ ಹೆಸರಿನ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದು ಗುಜರಾತ್ ರಾಜ್ಯದ ಅಹ್ಮದಾಬಾದ್ ನಲ್ಲಿ. ಅಹ್ಮದಾಬಾದ್ ನಗರದಿಂದ 8 ಕಿ.ಮೀ ದೂರವಿರುವ ಈ ನಿಲ್ದಾಣಕ್ಕೆ ಹೆಸರು ಭಾರತದ ಮಾಜಿ ಉಪಪ್ರಧಾನಿ ಹಾಗು ಉಕ್ಕಿನ ಮನುಷ್ಯನೆಂದೆ ಖ್ಯಾತಿ ಪಡೆದಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ರಿಂದ ಬಂದಿದೆ. == ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್ == ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಆಂಧ್ರದ ರಾಜಧಾನಿ ನಗರ ಹೈದರಾಬಾದ್ ನಲ್ಲಿ. ಈ ವಿಮಾನ ನಿಲ್ದಾಣವು ಕೊಚ್ಚಿ ನಂತರದಲ್ಲಿ ಎರಡನೆಯ ಸಾರ್ವಜನಿಕ ಹಾಗು ಖಾಸಗಿ ವಲಯಗಳ ಜಂಟಿ ಪಾಲುದಾರಿಕೆಯ ಯೋಜನೆಯಾಗಿದೆ. == ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ನಿಲ್ದಾಣ, ಗುವಾಹಟಿ == ಮೊದಲಿಗೆ ಗುವಾಹಟಿ ಅಥವಾ ಬೊರ್ಝರ್ ನಿಲ್ದಾಣ ಎಂದು ಕರೆಯಲ್ಪಡುತ್ತಿದ್ದ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದು ಈಶಾನ್ಯ ಭಾರತದ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ನಿರ್ವಹಿಸಲ್ಪಡುವ ಈ ನಿಲ್ದಾಣವು ಭಾರತೀಯ ವಾಯು ಸೇನೆಗೂ ಕೂಡ ಸೇವೆ ಸಲ್ಲಿಸುತ್ತದೆ. == ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು , ಕರ್ನಾಟಕ == ಮೊದಲಿಗೆ ಬಜ್ಪೆ ವಿಮಾನ ನಿಲ್ದಾಣವೆಂದು ಕರೆಯಲ್ಪಡುತ್ತಿದ್ದ ಮಂಗಳೂರಿನ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 1951 ಡಿಸೆಂಬರ್ 25 ರಂದು ಪ್ರಾರಂಭವಾಯಿತು. ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ಮಂಗಳೂರನ್ನು ಸಂಪರ್ಕಿಸುವ ಈ ವಿಮಾನ ನಿಲ್ದಾಣವು ಕರ್ನಾಟಕದಲ್ಲೆ ಮೊದ ಎರಡು ರನ್ ವೇ ಗಳುಳ್ಳ ನಿಲ್ದಾಣವಾಗಿತ್ತು. == ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿಮಾನ ನಿಲ್ದಾಣ, ನಾಗಪುರ, ಮಹಾರಾಷ್ಟ್ರ == ಮಹಾರಾಷ್ಟ್ರದ ನಾಗ್ಪುರ್ ನಲ್ಲಿದೆ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಭಾರತದ ಮ್ರಮುಖ ನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕ ಸಾಧಿಸುವ ಈ ನಿಲ್ದಾಣವು ಶಾರ್ಜಾ ದೇಶಕ್ಕೂ ಕೂಡ ವಿಮಾನ ಹರ್ರಟವನ್ನು ಒದಗಿಸುತ್ತದೆ. == ಬಿಜು ಪಟ್ನಾಯಕ್ ಏರ್ಪೋರ್ಟ್, ಭುವನೇಶ್ವರ, ಒಡಿಶಾ == ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಪ್ರಸ್ತುತ, ಒಡಿಶಾ ರಾಜ್ಯದಲ್ಲಿ ಇದೊಂದೆ ಪ್ರಮುಖ ವಾಯು ನೆಲೆಯಾಗಿದೆ. == ತಿರುಚಿರಾಪಳ್ಳಿ ವಿಮಾನ ನಿಲ್ದಾಣ, ತಿರುಚಿರಾಪಳ್ಳಿ, ತಮಿಳುನಾಡು == ತಮಿಳುನಾಡಿನ ತಿರುಚಿರಾಪಳ್ಳಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 210 ರ ಬಳಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಅಕ್ಟೋಬರ್ 4, 2012 ರಂದು ಇದನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಿಸಲಾಯಿತು. == ಕೊಯಮತ್ತೂರು ವಿಮಾನ ನಿಲ್ದಾಣ, ಕೊಯಮತ್ತೂರು, ತಮಿಳುನಾಡು == ತಮಿಳುನಾಡಿನ ಕೊಯಮತ್ತೂರಿನ ಪೀಲಮೆಡು ಎಂಬಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಕೊಯಮತ್ತೂರು ನಗರದಿಂದ ಕೇವಲ 11 ಕಿ.ಮೀ ದೂರದಲ್ಲಿದೆ. == ಚೌಧರಿ ಚರಣ್ ಸಿಂಗ್ ನಿಲ್ದಾಣ, ಲಖನೌ, ಉತ್ತರ ಪ್ರದೇಶ == ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಪ್ರದೇಶ ರಾಜ್ಯದ ರಾಜಧಾನಿ ಲಖನೌ ನಗರದಲ್ಲಿದೆ. ಅಕ್ಟೋಬರ್ 4, 2012 ರಂದು ಇದನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಿಸಲಾಯಿತು. == ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ನಿಲ್ದಾಣ, ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ == ಭಾರತದ ಅಂಡಮಾನ್ ಮತ್ತು ನಿಕೋಬಾರ್ ಗಳ ಪ್ರಮುಖ ವಾಯು ನಿಲ್ದಾಣವಾಗಿದೆ ಇದು. ಪೋರ್ಟ್ ಬ್ಲೇರ್ ನಗರದಿಂದ ಕೇವಲ 2 ಕಿ.ಮೀ ದೂರದಲ್ಲಿದೆ.